ಫಕ್ರುದ್ದೀನ್, ಅಲಿ ಅಹಮದ್

1905-77. ಭಾರತದ ಐದನೆಯ ರಾಷ್ಟ್ರಪತಿ ಹಾಗೂ ರಾಜಕಾರಣಿ. ದೆಹಲಿಯಲ್ಲಿ ಜನನ 13-5-1905. ಶ್ರೀಮಂತ ಕುಟುಂಬ. ಉತ್ತರ ಪ್ರದೇಶದ ಗೋಂಡ ಮತ್ತು ದೆಹಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ ಮುಗಿಸಿ ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಪದವಿ ಪಡೆದರು. ತರುವಾಯ ಕೇಂಬ್ರಿಜಿನ ಸೇಂಟ್ ಕ್ಯಾತರೀನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು ಬ್ಯಾರಿಸ್ಟರ್ ಅಟ್ ಲಾ ಪದವಿ ಗಳಿಸಿದರು. ಲಂಡನ್ನಿನ ಇನ್ನರ್ ಟೆಂಪಲ್‍ನಿಂದ ವಕೀಲಿ ವೃತ್ತಿಗೆ ಕರೆಬಂದರೂ ಭಾರತಕ್ಕೆ ಮರಳಿ ಅಸ್ಸಾಮಿನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಈ ರಾಜ್ಯದಲ್ಲಿಯೇ ಅವರ ರಾಜಕೀಯ ಜೀವನದ ಪದಾರ್ಪಣೆಯೂ ಆಯಿತು. 1931ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸಿಗೆ ಸೇರಿದರು. 1935ರಲ್ಲಿ ಅಸ್ಸಾಮ್ ವಿಧಾನಸಭೆಗೆ ಆಯ್ಕೆಯಾದರು. 1936ರಿಂದ ಅಸ್ಸಾಮ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸದಸ್ಯರಾಗಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. 1938-39ರಲ್ಲಿ ಸಚಿವರಾಗಿ ಅಸ್ಸಾಮ್ ಸರ್ಕಾರದ ಕೆಲಸದಲ್ಲಿ ಅಸ್ಸಾಮ್ ಸರ್ಕಾರದ ಕೆಲಸದಲ್ಲಿ ಪಾಲುಗೊಂಡರು. ಹಣಕಾಸು ಕಂದಾಯ ಖಾತೆಗಳನ್ನು ನಿರ್ವಹಿಸಿದರು. ಬ್ರಿಟಿಷ್ ಸರ್ಕಾರದ ವಿರುದ್ಧ ವೈಯಕ್ತಿಕ ಸತ್ಯಾಗ್ರಹ ಹೂಡಿ (1940) ತುರಂಗವಾಸ ಅನುಭವಿಸಿದರು. ಬಿಡುಗಡೆಯಾದ ತರುವಾಯ ಮತ್ತೆ ಬಂಧನಕ್ಕೊಳಗಾಗಿ ಭದ್ರತಾ ಕಾನೂನಿನ ಮೇಲೆ ಮೂರೂವರೆ ವರ್ಷ ಅಂದರೆ ಏಪ್ರಿಲ್ 1945ರ ತನಕ ಮತ್ತೆ ಕಾರಾಗೃಹದಲ್ಲಿದ್ದರು. ಮಹಾತ್ಮ ಗಾಂಧಿಯವರ ನಾಯಕತ್ವದಲ್ಲಿ ದೇಶಸೇವೆಗೆ ತಮ್ಮನ್ನು ಮುಡುಪಿಟ್ಟುಕೊಂಡ ಮುಸ್ಲಿಂ ನಾಯಕರಲ್ಲಿ ಫಕ್ರಿದ್ದೀನ್ ಅಲಿ ಅಹಮದ್ ಅವರೂ ಒಬ್ಬರು. ಅವರ ತಂದೆ ಕರ್ನಲ್ ಜûಲ್ನೂರ್ ಅಲಿ, ಭಾರತೀಯ ವೈದ್ಯಸೇವೆಯಲ್ಲಿದ್ದರು. 

 1946ರಿಂದ 1947ರ ತನಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯರಾಗಿದ್ದರು. 1946ರಲ್ಲಿ ಇವರನ್ನು ಅಸ್ಸಾಮಿನ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಯಿತು. (1946-52). ಅನಂತರ ರಾಜ್ಯಸಭಾಸದಸ್ಯರಾದರು (1954-57). 1955ರಲ್ಲಿ ರಷ್ಯಾಕ್ಕೆ ಹೋಗಿದ್ದ ಭಾರತೀಯ ವಕೀಲರ ನಿಯೋಗದ ನೇತೃತ್ವವನ್ನು ವಹಿಸಿದ್ದರು. 1957ರಲ್ಲಿ ವಿಶ್ವಸಂಸ್ಥೆಗೆ ಹೋದ ಭಾರತದ ನಿಯೋಗದ ಸದಸ್ಯರೂ ಆಗಿದ್ದರು. 1957-62 ಮತ್ತು 1962-66 ಎರಡು ಅವಧಿಯಲ್ಲಿ ಅಸ್ಸಾಮ್ ವಿಧಾನಸಭಾ ಸದಸ್ಯರಾಗಿದ್ದರು. ಅಸ್ಸಾಮ್ ಸರ್ಕಾರದಲ್ಲಿ 1957-62 ಅವಧಿಯಲ್ಲಿ ಹಣಕಾಸು ಕಾನೂನು ಸಮುದಾಯ ಅಭಿವೃದ್ಧಿ ಪಂಚಾಯಿತಿ ಮತ್ತು ಸ್ಥಳೀಯ ಕಾರ್ಯಾಡಳಿತ ಖಾತೆಗಳ ಸಚಿವರಾಗಿ ಕಾರ್ಯನಿರ್ವಹಿಸಿದರು. 1962-66 ಅವಧಿಯಲ್ಲಿ ಹಣಕಾಸು, ಕಾನೂನು, ಸಮುದಾಯ ಅಭಿವೃದ್ಧಿ ಮತ್ತು ಪಂಚಾಯಿತಿ ಖಾತೆಗಳ ಸಚಿವರಾಗಿದ್ದರು. 1966 ಏಪ್ರಿಲ್‍ನಲ್ಲಿ ಇವರನ್ನು ರಾಜ್ಯಸಭೆಗೆ ಆರಿಸಲಾಯಿತು. ಅದೇ ನವೆಂಬರಿನಲ್ಲಿ ಕೇಂದ್ರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ 1967 ಮಾರ್ಚ್ ತನಕ ಇದ್ದು ಮುಂದೆ 1969 ಫೆಬ್ರವರಿ ತನಕ ಔದ್ಯೋಗಿಕ ಅಭಿವೃದ್ಧಿ ಮತ್ತು ಕಂಪೆನಿ ವ್ಯವಹಾರ ಖಾತೆಯ ಸಚಿವರಾಗಿದ್ದರು. 1974 ಆಗಸ್ಟ್ 20 ರಂದು ಇವರನ್ನು ಭಾರತದ ರಾಷ್ಟ್ರಪತಿಯಾಗಿ ಆರಿಸಲಾಯಿತು. ಅದೇ 24ರಂದು ಅಧಿಕಾರ ಸ್ವೀಕಾರ ಮಾಡಿದರು ಅಧಿಕಾರದಲ್ಲಿದ್ದಾಗಲೇ 1977 ಫೆಬ್ರವರಿ 11 ರಂದು ಮಡಿದರು.	
						
ಇಂದಿರಾಗಾಂಧಿಯವರ ಅಣತಿಯಂತೆ 1975ರಲ್ಲಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಕಣ್ಮುಚ್ಚಿ ಅಂಕಿತ ಹಾಕಿದ ರಾಷ್ಟ್ರಪತಿ ಎಂಬ ಅಪವಾದಕ್ಕೂ ಫಕ್ರುದ್ದೀನ್ ಅಲಿ ಅಹ್ಮದ್ ಈಡಾದರು.				  (ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ